 
ಅನ್ಯತ್ರ ಸ್ಥಿತಿ
ಒಬ್ಬ ವ್ಯಕ್ತಿ ನಿರ್ದಿಷ್ಟವಾದ ಸ್ಥಳ ಮತ್ತು ಕಾಲದಲ್ಲಿ ಶಿಕ್ಷಾರ್ಹವಾದ ಕೃತ್ಯವನ್ನು ಮಾಡಿರುವುದಾಗಿ ಆರೋಪಿಸಿ, ಅವನನ್ನು ವಿಚಾರಣೆಗೆ ಗುರಿಪಡಿಸಿದಾಗ ಆ ವ್ಯಕ್ತಿ ಆ ಕೃತ್ಯ ನಡೆಯಿತೆಂದು ಹೇಳಲಾದ ಸ್ಥಳದಲ್ಲಾಗಲಿ, ಆ ಸಮಯದಲ್ಲಾಗಲಿ ಇರದೆ ಬೇರೊಂದು ಸ್ಥಳದಲ್ಲಿ ಇದ್ದುದಾಗಿ ರುಜುವಾತುಪಡಿಸಿ ಆರೋಪಿತಕೃತ್ಯ ತನ್ನಿಂದ ನಡೆದಿಲ್ಲವೆಂದು ಸೂಚಿಸುವ ಪ್ರಮಾಣವೇ (ಸಾಕ್ಷ್ಯತ್ವ) ಅನ್ಯತ್ರ ಸ್ಥಿತಿ (ಅಲಿಬಿ), ಫಿರ್ಯಾದಿ ಆರೋಪಣೆಯನ್ನು ರುಜುವಾತು ಪಡಿಸಲು ಸಾಕ್ಷಿಗಳನ್ನು ವಿಚಾರಣೆ ಮಾಡುವಾಗ, ಸಾಕ್ಷಿ ಹೇಳಿಸುವಾಗ, ಆರೋಪಿ ತನ್ನಿಂದ ಕೃತ್ಯನಡೆಯಿತೆನ್ನಲಾದ ಸ್ಥಳದಲ್ಲಾಗಲಿ ಸಮಯದಲ್ಲಾಗಲಿ ಇರದೇ ಪರಸ್ಥಳದಲ್ಲಿ ಇದ್ದನೆಂಬ ಅಂಶ ಸಂಗತವಾದುದು (ರೆಲವೆಂಟ್). ಅನ್ಯತ್ರ ಸ್ಥಿತಿ ಆರೋಪಿ ರುಜುವಾತುಪಡಿಸಬೇಕಾದ ಅಂಶವಿಲ್ಲ. ಅದು ಅವನ ಹೊಣೆಯೂ ಅಲ್ಲ. ಇದು ಫಿರ್ಯಾದಿಯ ಆರೋಪಣೆಯಲ್ಲಿರುವ ಅಸಂಭಾವ್ಯತೆಯನ್ನು ನ್ಯಾಯಾಲಯಕ್ಕೆ ತೋರಿಸಿಕೊಡುವುದರ ಮೂಲಕ ಆರೋಪಣೆಯಿಂದ ಬಿಡುಗಡೆ ಪಡೆಯುವ ಪ್ರಮಾಣಬದ್ಧ ಸೌಲಭ್ಯ.								
(ಎ.ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ